ರಸಲ್, ಹೆನ್ರಿ ನಾರಿಸ್
	1877-1957. ಸಂಯುಕ್ತ ಸಂಸ್ಥಾನಗಳ ಪ್ರಸಿದ್ಧ ಖಗೋಳವಿಜ್ಞಾನಿ. ನಾಕ್ಷತ್ರಿಕ ಖಗೋಳವಿಜ್ಞಾನ (ಸೈಡೀರಿಯಲ್ ಆಸ್ಟ್ರೊನಮಿ) ಮತ್ತು ಖಭೌತವಿಜ್ಞಾನ (ಆಸ್ಟ್ರೊಫಿಜಿûಕ್ಸ್) ವಿಷಯಗಳನ್ನು ಕುರಿತು ಅಧಿಕಾರವಾಣಿಯಿಂದ ತಿಳಿಯಹೇಳುತ್ತಿದ್ದ ಪ್ರತಿಭಾವಂತ. ಜನಿಸಿದ್ದು ನ್ಯೂಯಾರ್ಕ್ ರಾಜ್ಯದ ಆಯ್‍ಸ್ಟರ್ ಬೇ ಎಂಬಲ್ಲಿ (25 ಅಕ್ಟೋಬರ್ 1877). ಇವನ ಆರಂಭಿಕ ವಿದ್ಯಾಭ್ಯಾಸವೆಲ್ಲ ಇವನ ಹನ್ನೆರಡನೆಯ ವಯಸ್ಸಿನ ತನಕ ಮನೆಯಲ್ಲೇ ನಡೆದಿತ್ತು. ಇದಾದ ಬಳಿಕ ಇವನ ಅಜ್ಜ-ಅಜ್ಜಿಯರ ತವರೂರಾದ ಪ್ರಿನ್‍ಸ್ಟನ್ನಿನಲ್ಲೇ ಸಾಂಪ್ರದಾಯಿಕ ಶಾಲಾ ಶಿಕ್ಷಣವನ್ನು ಪಡೆದ. ಅಲೆಗ್ಸಾಂಡರ್ ರಸಲ್ ಇವನ ತಂದೆ. ಈತ ಅಮೆರಿಕಕ್ಕೆ ವಲಸೆ ಬಂದವನಾಗಿದ್ದ. ಆಯ್‍ಸ್ಟರ್ ಬೇ ಎಂಬಲ್ಲಿನ ಚರ್ಚ್ ಒಂದರಲ್ಲಿ ಪ್ರೆಸ್‍ಬೈಟೇರಿಯನ್ ಪಾದ್ರಿಯಾಗಿದ್ದವ. ಹೆನ್ರಿ ರಸಲನ ತಾಯಿ ಮತ್ತು ಅಜ್ಜಿಯರು ಸ್ವಲ್ಪಮಟ್ಟಿಗೆ ವಿದ್ಯಾವಂತರಾಗಿದ್ದು ಗಣಿತ ವಿಜ್ಞಾನದಲ್ಲಿ ಕೊಂಚಮಟ್ಟಿನ ಒಲವನ್ನು ಮೂಡಿಸಿಕೊಂಡಿದ್ದವರು. ಇದು ರಸಲನಿಗೆ ಒಂದು ರೀತಿ ಅನುಕೂಲವಾಗೇ ಪರಿಣಮಿಸಿತು. ಮುಂದೆ ಪ್ರಿನ್‍ಸ್ಟನ್ ವಿಶ್ವವಿದ್ಯಾಲಯ ಸೇರಿ ರಸಲ್ 1897ರಲ್ಲಿ ಅಲ್ಲಿಯ ಪದವೀಧರನಾದ. ಮುಂದೆ 1900ರಲ್ಲಿ ಇವನಿಗೆ ಡಾಕ್ಟೊರೇಟ್ ಪದವಿ ಲಭಿಸಿತು. ಮಂಗಳ ಗ್ರಹದ ಉಪಗ್ರಹದಲ್ಲಿ ಒಂದಾಗಿರುವ ಈರೋಸ್‍ನ ದೀರ್ಘಾಕ್ಷದ ಕ್ಷೋಭೆಗಳನ್ನು ಕುರಿತ ಪ್ರೌಢಪ್ರಬಂಧವೊಂದನ್ನು ಈತ ಬರೆದಿದ್ದ.

	ಪದವಿಗಳಿಸಿಕೊಂಡ ಬಳಿಕ ರಸಲನ ಆರೋಗ್ಯ ಅಷ್ಟಾಗಿ ಉತ್ತಮವಾಗಿರಲಿಲ್ಲ. ಹೀಗಾಗಿ ಒಂದು ವರ್ಷಕಾಲ ಹಾಗೆಯೇ ಆಯ್‍ಸ್ಟರ್‍ಬೇ ಎಂಬಲ್ಲೇ ಇರಬೇಕಾಯಿತು. 1901ರಲ್ಲಿ ಪ್ರಿನ್‍ಸ್ಟನ್ಸಿಗೆ ಹಿಂದಿರುಗಿ ಮುಂದಿನ ಮೂರು ವರ್ಷಗಳ ಕಾಲ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲೇ ಇದ್ದ. ಮೊದಲನೆಯ ವರ್ಷ ಕಿಂಗ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಆಗಿದ್ದು ಕ್ಯಾವೆಂಡಿಷ್ ಪ್ರಯೋಗಾಲಯದಲ್ಲೂ ಕೆಲಸ ಮಾಡಿದ. ಮುಂದಿನ ಎರಡು ವರ್ಷಗಳಲ್ಲಿ ಕೇಂಬ್ರಿಜ್ ಖಗೋಳ ವೀಕ್ಷಣಾಲಯದಲ್ಲಿ ಸಂಶೋಧನ ಸಹಾಯಕನಾಗಿ ಸೇವೆ ಸಲ್ಲಿಸಿದ. ಇದಕ್ಕೆ ಇವನಿಗೆ ವಾಷಿಂಗ್‍ಟನ್ನಿನ ಕಾರ್ನೆಗೀ ಇನ್‍ಸ್ಟಿಟ್ಯೂಷನ್ನಿನ ಬೆಂಬಲವೂ ದೊರಕಿತ್ತು. ಅಲ್ಲಿ ಈತ ಆರ್ತರ್ ಹಿಂಕ್ಸ್ ಎಂಬವನೊಡಗೂಡಿ ಛಾಯಾಚಿತ್ರ ವಿಧಾನಗಳಿಂದ ನಾಕ್ಷತ್ರಿಕ ದಿಗಂತರಗಳನ್ನು (ಸ್ಟೆಲ್ಲಾರ್ ಪ್ಯಾರಲಾಕ್ಸಸ್) ಕುರಿತು ಕೆಲಸ ಮಾಡಿದ. ಮತ್ತೆ ರಸಲನ ಆರೋಗ್ಯ ಕೆಟ್ಟಿದ್ದರ ಸಲುವಾಗಿ ಇವನ ಅಳಿದುಳಿದ ಕೆಲಸಗಳನ್ನು ಹಿಂಕ್ಸ್ ಮುಂದುವರಿಸಬೇಕಾಯಿತು.

	ರಸಲ್ 1905ರಲ್ಲಿ ಪ್ರಿನ್‍ಸ್ಟನ್ನಿನಲ್ಲಿ ಖಗೋಳವಿಜ್ಞಾನದ ಬೋಧಕನ ಹುದ್ದೆಯನ್ನು ಸ್ವೀಕರಿಸಿದ. 1911ರಲ್ಲಿ ಖಗೋಳ ವಿಜ್ಞಾನದ ಪ್ರಾಧ್ಯಾಪಕ ಹುದ್ದೆ ಇವನಿಗೆ ಲಭಿಸಿತು. 1912ರಲ್ಲಿ ಖಗೋಳ ವೀಕ್ಷಣಾಲಯದ ನಿರ್ದೇಶಕನಾಗಿ ನೇಮಕಗೊಂಡು ತನ್ನ ನಿವೃತ್ತಿಯ ದಿನದ ತನಕವೂ (1947) ಅದೇ ಹುದ್ದೆಯಲ್ಲಿ ಮುಂದುವರೆದ. 1914ರಲ್ಲಿ ನಕ್ಷತ್ರಗಳ ಕಾಂತಿ, ಬಣ್ಣ ಮತ್ತು ಅವುಗಳ ರೋಹಿತ ವರ್ಗಗಳನ್ನು ಕುರಿತಂತೆ ತನ್ನ ವೀಕ್ಷಣೆಗಳನ್ನು ಪ್ರಕಟಪಡಿಸಿದ. ಕೆಂಪುವರ್ಣದ ನಕ್ಷತ್ರಗಳು ಹಳದಿ ಬಣ್ಣದವಕ್ಕಿಂತಲೂ ಕಡಿಮೆ ಉಷ್ಣತೆಯಿಂದ ಕೂಡಿರುತ್ತವೆ ಎಂಬುದನ್ನು ಈತ ಮನಗಂಡ. ಈ ಬಗ್ಗೆ ಜರ್ಮನಿಯ ಭೌತವಿಜ್ಞಾನಿ ವಿಲ್‍ಹೆಲ್ಮ್ ವೀನ್ (1864-1928) ಇಪ್ಪತ್ತು ವರ್ಷಗಳ ಮುಂಚೆಯೇ ಸ್ಪಷ್ಟೀಕರಣ ನೀಡಿದ್ದ. ರಸಲ್ 1918 ರಿಂದ 1919ರ ತಿಂಗಳುಗಳ ತನಕ ಸೇವಾ ಪಡೆಯ ವಾಯುಯಾನ ವಿಭಾಗದ ವಿಮಾನ ತಯಾರಿಕಾ ಸಂಸ್ಥೆಯಲ್ಲಿ ಪ್ರಾಯೋಗಿಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ.

	ಅಮೆರಿಕದ ಮೌಂಟ್‍ವಿಲ್ಸನ್ ಖಗೋಳ ವೀಕ್ಷಣಾಲಯದ ಸಂಪರ್ಕವನ್ನು 1921ರಲ್ಲಿ ರಸಲ್ ಇರಿಸಿಕೊಂಡು ತನ್ನ ನಿವೃತ್ತಿದಿನದ ತನಕವೂ ಅಲ್ಲೇ ಸಂಶೋಧನೆಗಳನ್ನು ಮುಂದುವರಿಸಿದ. ಕ್ಯಾಲಿಫೋರ್ನಿಯದಲ್ಲಿನ ಈ ಹುದ್ದೆಯಿಂದ ನಿವೃತ್ತಿಗೊಂಡ ಬಳಿಕ ಲಿಕ್ ಮತ್ತು ಹಾರ್ವರ್ಡ್ ವೀಕ್ಷಣಾಲಯಗಳಲ್ಲೂ ಸಂಶೋಧನಾ ಕಾರ್ಯವನ್ನು ಮುಂದುವರಿಸಿದ.

	ರಸಲ್ ಹಲವಾರು ಸಂಘಸಂಸ್ಥೆಗಳ ಸಂಪರ್ಕವನ್ನು ಇಟ್ಟುಕೊಂಡು ಸಕ್ರಿಯ ಸೇವೆ ಸಲ್ಲಿಸಿದ. ಅಮೆರಿಕನ್ ಆಸ್ಟ್ರೊನಾಮಿಕಲ್ ಸೊಸೈಟಿಯ ಅಧ್ಯಕ್ಷನಾಗಿ (1934-37) ಅಮೆರಿಕನ್ ಫಿಲಾಸಫಿಕಲ್ ಸೊಸೈಟಿಯ ಅಧ್ಯಕ್ಷನಾಗಿ (1931-32) ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಯ ಅಧ್ಯಕ್ಷನಾಗಿ (1933), ರಾಯಲ್ ಆಸ್ಟ್ರೊನಾಮಿಕಲ್ ಸೊಸೈಟಿಯ ಅಸೋಸಿಯೇಟ್ ಆಗಿ, ರಾಯಲ್ ಸೊಸೈಟಿಯ ವಿದೇಶೀ ಸದಸ್ಯನಾಗಿ, ಪ್ಯಾರಿಸ್, ಬ್ರಸಲ್ಸ್ ಮತ್ತು ರೋಮ್‍ಗಳಲ್ಲಿನ ಅಕಾಡೆಮಿಗಳ ಬಾತ್ಮೀದಾರನಾಗಿ ಹೀಗೆ ವಿವಿಧ ಪ್ರಕಾರಗಳಲ್ಲಿ ಇವನ ಸೇವೆ ಸಂದಿತ್ತು. ನಾಕ್ಷತ್ರಿಕ ರೋಹಿತ ವಿಜ್ಞಾನ ಮತ್ತು ನಕ್ಷತ್ರಗಳ ರಾಚನಿಕ ಸ್ಥಿತಿಗಳನ್ನು ಕುರಿತಂತೆ ಇದ್ದ ಇಂಟರ್‍ನ್ಯಾಷನಲ್ ಆಸ್ಟ್ರೊನಾಮಿಕಲ್ ಯೂನಿಯನ್ ನೇಮಕ ಮಾಡಿದ ಆಯೋಗಗಳ ಅಧ್ಯಕ್ಷನೂ ಆಗಿದ್ದ. ಇವನ ಸೇವೆಯನ್ನು ಗುರುತಿಸಿ ಈತನಿಗೆ ಡ್ರೇಪರ್, ಬ್ರೂಸ್, ರಮ್‍ಫರ್ಡ್, ಫ್ರಾಂಕ್ಲಿನ್, ಜೆನ್‍ಸನ್ ಪದಕಗಳನ್ನೂ ರಾಯಲ್ ಆಸ್ಟ್ರೊನಾಮಿಕಲ್ ಸೊಸೈಟಿಯ ಪದಕಗಳನ್ನೂ ನೀಡಲಾಯಿತು. ಇದಲ್ಲದೆ ಲ್ಯಾಲೆಂಡ್ ಬಹುಮಾನವೂ ಸಂದಿತ್ತು. ಇವನ ಗೌರವಾರ್ಥವಾಗಿ ಅಮೆರಿಕನ್ ಆಸ್ಟ್ರೊನಾಮಿಕಲ್ ಸೊಸೈಟಿ ಹೆನ್ರಿ ನಾರಿಸ್ ರಸಲ್ ವಾರ್ಷಿಕ ಉಪನ್ಯಾಸಪೀಠವನ್ನು ಸ್ಥಾಪಿಸಿತು (1946).

	ತನ್ನ 60 ವರ್ಷಗಳ ಸಂಶೋಧನೆಯ ಅವಧಿಯಲ್ಲಿ ರಸಲ್ ಖಗೋಳ ಭೌತವಿಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಸಂಶೋಧನೆಗಳನ್ನು ನಡೆಸಿದ. ಅವುಗಳಲ್ಲಿ ಪ್ರಮುಖವಾದವೆಂದರೆ-ಗ್ರಹಣಕಾರಕ ಯಮಳ ನಕ್ಷತ್ರಗಳಿಂದ ಹೊರಹೊಮ್ಮುವ ಬೆಳಕಿನ ವಿಚಾರಣೆಯನ್ನು ಕುರಿತ ಸಂಶ್ಲೇಷಣೆ, ದಿಗಂತರವನ್ನ ಕುರಿತಂತೆ ಇದ್ದ ಅಧ್ಯಯನಗಳನ್ನು ಆಧರಿಸಿ ನಾಕ್ಷತ್ರಿಕ ಉತ್ಪತ್ತಿಯ ಬಗ್ಗೆ ಸಿದ್ಧಾಂತವೊಂದರ ರೂಪಣೆ; ಸೌರ ವಾಯುಮಂಡಲದಲ್ಲಿ ಇರುವ ವಿವಿಧ ರಾಸಾಯನಿಕ ಧಾತುಗಳ ಸಮೃದ್ಧಿಯನ್ನು ಕುರಿತು ವಿಶ್ವಾಸಾರ್ಹ ನಿರ್ಧರಣೆಗೆ ಅವಕಾಶ ಮಾಡಿಕೊಟ್ಟ ಸೂರ್ಯನ ಅವಶೋಷಣ ರೇಖಾ-ರೋಹಿತಗಳ ಪರಿಮಾಣಾತ್ಮಕ ಪರೀಕ್ಷೆಗಳ ಸರಣಿಗಳ ಪ್ರಾರಂಭ (1920ರ ದಶಕಗಳಲ್ಲಿ); ಕ್ಯಾಲ್ಸಿಯಮ್, ಟೈಟಾನಿಯಮ್ ಮತ್ತು ಪ್ರಮುಖವಾಗಿ ಕಬ್ಬಿಣ ಮೊದಲಾದ ಧಾತುಗಳಿಂದ ಉಂಟಾಗುವ ರೋಹಿತಗಳ ವ್ಯಾಪಕ ವಿಶ್ಲೇಷಣೆಯನ್ನು ತನ್ನಿತರ ಸಹೋದ್ಯೋಗಿಗಳೊಂದಿಗೆ ನಡೆಸಿದ್ದು, ಇತ್ಯಾದಿ. ಒಂದು ನಿರ್ದಿಷ್ಟ ಬಹುರೇಖಾರೋಹಿತದ ರೇಖೆಗಳ ಸಾಪೇಕ್ಷ ಸಾಮಥ್ರ್ಯಗಳಿಗೆ ಸಂಬಂಧಿಸಿದಂತೆ ಒಂದು ಮೂಲಾನುಪಾತ ನಿಯಮವನ್ನು ರಸಲ್ ರೂಪಿಸಿದ್ದು ಈ ಅಧ್ಯಯನಗಳ ಸಲುವಾಗಿಯೇ.

	ರಸಲ್ ಪ್ರಿನ್ಸ್‍ಸ್ಟನ್ನಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಇವನ ಮೊದಾಮೊದಲ ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿದ್ದವು. ಇವನ ಅನೇಕ ಪ್ರಬಂಧಗಳು ಖಗೋಳೀಯ ಬಲವಿಜ್ಞಾನ ಮತ್ತು ಕಕ್ಷಾನಿರ್ಧರಣೆಗಳಿಗೆ ಸಂಬಂಧಿಸಿದಾಗಿತ್ತು. ಅಲ್ಗಾಲ್ ವರ್ಗದ ಚರಕಾಂತೀಯ ನಕ್ಷತ್ರಗಳ ಬಗ್ಗೆ ಸಂಶೋಧನೆ ನಡೆಸಿ ಈ ನಕ್ಷತ್ರಗಳು ಒಂದು ವಿಶಿಷ್ಟಬಗೆಯದವಾಗಿದ್ದು ಇವುಗಳ ಸಾಂದ್ರತೆ ಸೂರ್ಯನ ಸಾಂದ್ರತೆಗಿಂತಲೂ ಕಡಿಮೆಯಾಗಿರುತ್ತದೆಂದು ನಿರ್ಧರಿಸಿದ. ಈ ನಿರ್ಧರಣೆ ನಾಕ್ಷತ್ರಿಕ ಉಗಮಗಳನ್ನು ಕುರಿತಂತೆ ಇವನ ಮುಂದಿನ ಕೆಲಸಕ್ಕೆ ಬಲು ಸಹಕಾರಿಯಾಯಿತು.

	ನಕ್ಷತ್ರಗಳಿಂದ ಹೊರಬರುವ ಬೆಳಕಿನ ರೋಹಿತಗಳನ್ನು ಅಭ್ಯಸಿಸುವುದಕ್ಕೆ ಆ ರೋಹಿತಗಳ ಫೋಟೋಗ್ರಾಫಿಕ್ ಫಲಕಗಳನ್ನು ತಯಾರಿಸಿಕೊಂಡು ಅವುಗಳ ವಿಶ್ಲೇಷಣೆಯ ಕೆಲಸವನ್ನು ರಸಲ್ ನಡೆಸಿದ. ಇದರಿಂದಾಗಿ ಬೇರೆ ಬೇರೆ ನಕ್ಷತ್ರಗಳ ರೋಹಿತಪ್ರರೂಪಗಳು ಮತ್ತು ನಿರಪೇಕ್ಷ ಕಾಂತಿಮಾನಗಳ ನಡುವಿನ ಅನ್ಯೋನ್ಯ ಸಂಬಂಧ ಇರುವುದು ಸ್ಥಿರಪಟ್ಟಿತು. ಜ್ಞಾತದಿಗಂತರ ಇರುವ ನಕ್ಷತ್ರಗಳಿಗೆ ಸಂಬಂಧಿಸಿದಂತೆ ಅವುಗಳ ನಿರಪೇಕ್ಷ ಕಾಂತಿಮಾನ ಃ-ಪ್ರರೂಪದಿಂದ ಒ ಪ್ರರೂಪಕ್ಕೆ ಕ್ರಮಾಗತವಾಗಿ ಕಡಿಮೆಯಾಗುವುದನ್ನು ರಸಲ್ ಮನಗಂಡ. ನಕ್ಷತ್ರಗಳ ಮೇಲ್ಮೈ ಉಷ್ಣತೆ ಮತ್ತು ಕಾಂತೀಯತೆಗಳನ್ನು ಆಧರಿಸಿ ಅವುಗಳ ಉಷ್ಣತೆಯ ಆರೋಹೀಕ್ರಮದಲ್ಲಿ ಒಂದು ನಕ್ಷೆಯ ರೂಪಸದಲ್ಲಿ ಅಳವಡಿಸಲಾಗಿದೆ. ನಕ್ಷತ್ರಗಳ ಬಣ್ಣ ಮತ್ತು ಕಾಂತೀಯತೆಗಳ ನಡುವಿನ ಸಂಬಂಧದಲ್ಲಿ ಡೇನಿಷ್ ಖಗೋಳ ವಿಜ್ಞಾನಿ ಐನಾರ್ ಹಟ್ರ್ಸ್ ಪ್ರುಂಗ್ ಸಾಕಷ್ಟು ಹಿಂದೆಯೇ (1905) ಕೆಲಸ ಮಾಡಿದ್ದನಾದರೂ ಆ ಬಗ್ಗೆ ಖಗೋಳ ವಿಜ್ಞಾನ ಪ್ರಪಂಚಕ್ಕೆ ಬಹಿರಂಗ ಪಡಿಸಲು ಮುಂದುವರೆದಿರಲಿಲ್ಲ. ಫೋಟೋಗ್ರಫಿಯಲ್ಲಿ ಸಾಕಷ್ಟು ಪರಿಶ್ರಮ ಪಡೆದಿದ್ದನಾದ್ದರಿಂದ ಹಟ್ರ್ಸ್‍ಪ್ರುಂಗ್ ತಾನು ತೆಗೆದಿದ್ದ ನಕ್ಷತ್ರಗಳ ಛಾಯಾಚಿತ್ರಗಳಿಂದ ನಾಕ್ಷತ್ರಿಕ ಕಾಂತಿಮಾನಗಳನ್ನು ನಿರ್ಧರಿಸುವುದರಲ್ಲಿ ಸಾಕಷ್ಟು ಕೆಲಸ ಮಾಡಿದ್ದ. ಇದರ ಬಗ್ಗೆ ಆತ ಫೋಟೋಗ್ರಫಿ ನಿಯತಕಾಲಿಕೆಯೊಂದರಲ್ಲಿ ಅಷ್ಟಾಗಿ ಜನಪ್ರಿಯವಲ್ಲದ ರೀತಿಯಲ್ಲಿ ತನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದ. ರಸಲ್ ಈ ವಿಚಾರದಲ್ಲಿ ನಡೆಸಿದ್ದ ಸಂಶೋಧನೆಗಳೂ ಹಟ್ರ್ಸ್‍ಪ್ರುಂಗನ ವಿಚಾರಧಾರೆಯೂ ಹೆಚ್ಚು ಕಡಿಮೆ ಒಂದೇ ಆಗಿದ್ದರಿಂದ ಈ ಸಾಧನೆಯಫಲವನ್ನು ಇಬ್ಬರೂ ಹಂಚಿಕೊಳ್ಳುವಂತಾಯಿತು. ಹೀಗಾಗಿ ನಕ್ಷತ್ರಗಳ ಮೇಲ್ಮೈ ಉಷ್ಣತೆ, ಕಾಂತಿಮಾನಗಳನ್ನು ಕುರಿತ ಚಿತ್ರಕ್ಕೆ ಹಟ್ರ್ಸ್‍ಪ್ರುಂಗ್ ರಸಲ್ ಚಿತ್ರವೆಂದೇ (ಊ-ಖ ಡಯಾಗ್ರಮ್) ಹೆಸರಾಗಿದೆ. ನಾಕ್ಷತ್ರಿಕ ಉಗಮವನ್ನು ಕುರಿತಂತೆ ತನ್ನ ಸಿದ್ಧಾಂತವನ್ನು 1913ರ ಡಿಸೆಂಬರ್ ತಿಂಗಳಲ್ಲಿ ರಸಲ್ ಪ್ರಕಟಪಡಿಸಿದ. ಇದೇ ವೇಳೆ ದೈತ್ಯ (ಜಯಂಟ್) ನಕ್ಷತ್ರಗಳು ಮತ್ತು ಕುಬ್ಜ (ಡ್ವಾಫ್ರ್ಸ್) ನಕ್ಷತ್ರಗಳು ಎಂಬ ನಕ್ಷತ್ರಗಳ ವರ್ಗೀಕರಣವೂ ಮೂಡಿಬಂತು.

	1914-21ರ ಅವಧಿಯಲ್ಲಿ ರಸಲ್ ಬಹಳಷ್ಟು ವಿಷಯಗಳನ್ನು ಕುರಿತಂತೆ ಕೆಲಸ ಮಾಡಿದ. ಇವುಗಳಲ್ಲಿ ಬಹುತೇಕ, ನಕ್ಷತ್ರಗಳ ಉಗಮವನ್ನೇ ಕುರಿತಂತೆ ಆಗಿದ್ದವು. ದೃಗ್ಗೋಚರ ಯಮಳ ನಕ್ಷತ್ರಗಳ ಕಕ್ಷೆಗಳು ಮತ್ತು ಘಟಕ ನಕ್ಷತ್ರಗಳ ರಾಶಿ ನಿರ್ಧರಣೆಗಳನ್ನು ಕುರಿತು ಅನೇಕ ಪ್ರಬಂಧಗಳನ್ನು ಮಂಡಿಸಿದ. ಹಾರ್ವರ್ಡ್, ಯೇಲ್ ಮತ್ತು ಪ್ರಿನ್‍ಸ್ಟನ್ ಖಗೋಳ ವೀಕ್ಷಣಾಲಯಗಳಲ್ಲಿ ಫೋಟೋಗ್ರಾಫಿಕ್ ತಂತ್ರದ ರೀತ್ಯ ಚಂದ್ರಸ್ಥಾನಗಳ ನಿರ್ಧರಣೆಯ ಬಗ್ಗೆ ಕೆಲಸವನ್ನು ಮುಂದುವರಿಸಿದ. 1921ರಲ್ಲಿ ಈತ ಭೂಮಿಯ ಹೊರ ಪದರದ ವಯಸ್ಸು ಸುಮಾರು 4(109 ವರ್ಷಗಳೆಂದು ತಿಳಿಸಿ ಕೊಟ್ಟ. ಇದಕ್ಕೆ ಯುರೇಯಮ್ಮಿನ ರೇಡಿಯೋವಿಕಿರಣ ವಿಧಾನವನ್ನು ಅಳವಡಿಸಿಕೊಂಡಿದ್ದ. ಈ ವೀಕ್ಷಣಾಲಯಗಳಲ್ಲಿ ಕೆಲಸ ಮಾಡುವಾಗ ರಸಲನಿಗೆ ಪ್ರಮುಖ ರೋಹಿತ ವಿಜ್ಞಾನಿಗಳ ಸಂಪರ್ಕ ಒದಗಿಬಂದು ಸೌರರೋಹಿತದ ಬಗ್ಗೆ ಹೆಚ್ಚಿನ ವಿಶ್ಲೇಷಣೆ ನಡೆಸುವುದು ಸಾಧ್ಯವಾಯಿತು. ವಾಲ್ಟರ್ ಎಸ್. ಆಡಮ್ಸ್, ಜಾನ್ ಕ್ಯು. ಸ್ಟೀವರ್ಟ್, ಎಫ್. ಎ. ಸ್ಯಾಂಡರ್ಸ್, ಗ್ರಿಗೋರ್ ವೆಂಟ್‍ಜೆಲ್ ಮೊದಲಾದವರೊಡಗೂಡಿ ಖಭೌತವಿಜ್ಞಾನಕ್ಷೇತ್ರದಲ್ಲಿ ಮಹತ್ತ್ವಪೂರ್ಣ ಕೆಲಸಗಳನ್ನು ನಿರ್ವಹಿಸಿದ ನಾಕ್ಷತ್ರಿಕ ರಚನೆ ಮತ್ತು ಉಗಮಗಳ ಅನುಪಮ ಸಂಶೋಧನೆಗಳನ್ನು ನಡೆಸಿ ರಸಲ್ ಪ್ರಪಂಚ ಮನ್ನಣೆಗೆ ಪಾತ್ರನಾದ. 1919ರಲ್ಲಿ ರಸಲ್ ಸಮಕಾಲೀನ ಸಂಶೋಧನೆಗಳನ್ನು ಕುರಿತು ವಿಮರ್ಶೆಗಳನ್ನು ಬರೆದ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ನ ಕೋರಿಕೆಯ ಮೇರೆಗೆ ನಾಕ್ಷತ್ರಿಕ ಖಗೋಳ ವಿಜ್ಞಾನದ ಪ್ರಚಲಿತ ಸಂಶೋಧನೆ ಕುರಿತು ಸಮಗ್ರ ವಿಮರ್ಶೆ ಸಿದ್ಧಪಡಿಸಿ ಕೆಲವು ಪ್ರಮುಖ ಸಮಸ್ಯೆಗಳ ಪರಿಹಾರಗಳ ಬಗ್ಗೆ ತನ್ನ ಸಹೋದ್ಯೋಗಿಗಳ ಗಮನ ಸೆಳೆದ. 1930ರ ಬಳಿಕ ರಸಲ್ ಭೌತವಿಜ್ಞಾನದ ವಿವಿಧ ಕ್ಷೇತ್ರಗಳ ಬಗ್ಗೆ ಉಪನ್ಯಾಸಗಳನಿತ್ತ. ಪ್ರಪಂಚ ಖ್ಯಾತಿ ಪಡೆದಿರುವ ಸೈನ್ಟಿಫಿಕ್ ಅಮೆರಿಕನ್ ಮಾಸಿಕ ಪತ್ರಿಕೆಗೆ ಲೇಖನಗಳನ್ನು ಬರೆದ. 1943ರ ವೇಳೆಗೆ 500 ಲಘು ಲೇಖನಗಳನ್ನು ಖಗೋಳ ವಿಜ್ಞಾನದ ವಿವಿಧ ವಿಷಯಗಳ ಮೇಲೆ ಈತ ಬರೆದಿದ್ದ.

	ಐವತ್ತು ವರ್ಷಗಳ ಪರ್ಯಂತ ರಸಲ್ ಅಧ್ಯಯನ, ಸಂಶೋಧನೆಗಳಲ್ಲಿ ನಿರತನಾಗಿದ್ದು ನಕ್ಷತ್ರಗಳ ಭೌತವೃತ್ತಾಂತಗಳ ಬಗ್ಗೆ ಸ್ಪಷ್ಟ ಚಿತ್ರವನ್ನು ವಿಜ್ಞಾನ ಪ್ರಪಂಚಕ್ಕೆ ಒದಗಿಸಿಕೊಟ್ಟ. ನ್ಯೂ ಜರ್ಸಿ ರಾಜ್ಯದ ಪ್ರಿನ್‍ಸ್ಟನ್ನಿನಲ್ಲಿ ರಸಲ್ 1957ರ ಫೆಬ್ರವರಿ 18ರಂದು ನಿಧನನಾದ.								
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ